ಬಡ ರಾಷ್ಟ್ರದಿಂದ ವಿಶ್ವಗುರುವಿನತ್ತ ಭಾರತ : ಡಾ.ಸುಧೀರ್ ಪೈ
ಮಧುಗಿರಿ - ಒಂದು ಕಾಲದಲ್ಲಿ ಬಡ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದ್ದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ವಿಶ್ವಗುರುವಿನತ್ತ ಸಾಗುತ್ತಿದೆ ಎಂದು ಕಾರ್ಡಿಯಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುದೀರ್ ಪೈ ಕೆ ಎಲ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಹರಿಹರ ರೊಪ್ಪಾ ಗ್ರಾಮದಲ್ಲಿರುವ ಕಾರ್ಡಿಯಲ್ ಇಂಟರ್ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ ದೊಡ್ಡದಾಗಿದ್ದರೂ, ದೇಶದ ಅಭಿವೃದ್ಧಿಯೊಂದಿಗೆ ಜನರ ಜೀವನಮಟ್ಟವೂ ಸುಧಾರಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಹಲವು ದೇಶಗಳಿಗೆ ಲಸಿಕೆಗಳನ್ನು ಪೂರೈಸಿ ಜಾಗತಿಕ ಮಟ್ಟದಲ್ಲಿ ಮಹತ್ವದ ಪಾತ್ರ ವಹಿಸಿತು ಎಂದರು.
ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇಂದಿನ ಯುವಕರು ಮುಂದಾಗಬೇಕು. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಮಾಡಿದ ತ್ಯಾಗ ಮತ್ತು ಬಲಿದಾನದ ಫಲವಾಗಿ ನಾವು ಇಂದು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಪ್ರಾಮಾಣಿಕವಾಗಿ ಓದುವುದು ಕೂಡ ದೇಶ ಸೇವೆಯ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ನಿವೃತ್ತ ಹಾವಿಲ್ದಾರ್ ಉನ್ನಿಕೃಷ್ಣನ್ ಆರ್. ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಡಾಕ್ಟರ್, ಇಂಜಿನಿಯರ್ ಮುಂತಾದ ಹುದ್ದೆಗಳಿಗೆ ಸೇರಬೇಕೆಂಬ ಹಂಬಲದಲ್ಲಿರುತ್ತಾರೆ. ಆದರೆ ನಿಸ್ವಾರ್ಥ ಭಾವನೆಯಿಂದ ದೇಶ ಸಲ್ಲಿಸುವ ಭಾರತೀಯ ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ವೇಳೆ ಹಾವಿಲ್ದಾರ್ ಉನ್ನಿಕೃಷ್ಣನ್ ಆರ್. ಅವರಿಗೆ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳು ಬ್ಯಾಂಡ್, ಪರೇಡ್ ಗಳ ಮೂಲಕ ನೆರೆದಿದ್ದ ಗಣ್ಯ ಅತಿಥಿಗಳಿಗೆ ಗೌರವ ಸಲ್ಲಿಸಿದರು. ಬಳಿಕ ಆಡಿಟೋರಿಯಂನ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಡಿಯಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಮನಾಥ್ ಪ್ರಭು, ಟ್ರಸ್ಟಿಗಳಾದ ಪ್ರಥಮ್ ಪೈ ಹಾಗೂ ಪ್ರೀತಮ್ ಪೈ, ಸಿ.ಟಿ.ಒ. ಮಂಜುನಾಥ್ ನಾಯಕ್, ಅಶ್ವಿನಿ ಪೈ, ಶಾಲಾ ಪ್ರಾಂಶುಪಾಲ ವಿನೋದ್ ಕುಮಾರ್ ಪಿ.ಎಸ್., ಕಾಲೇಜು ಪ್ರಾಂಶುಪಾಲ ರವಿ ಆರ್., ಮ್ಯಾನೇಜರ್ ಪ್ರದೀಪ್ ಕುಮಾರ್ ಹಾಗೂ ಪಿಆರ್ಒ ನಂದಿನಿ ಸಿ. ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.